ಪರಂಗಿ ಚಕ್ಕೆ -
	ಲಿಲಿಯೇಸೀ ಕುಟುಂಬಕ್ಕೆ ಸೇರಿದ ಅಡರು ಬಳ್ಳಿ. ಸ್ಮೈಲ್ಯಾಕ್ಸ್ ಆಸ್ಪರ ಶಾಸ್ತ್ರೀಯ ಹೆಸರು. ಕಾಂಡದ ಮೇಲೆ ಮುಳ್ಳುಗಳುಂಟು. ಕಾಂಡ ಬಲಯುತವಲ್ಲ. ಎಲೆಗಳು ಸರಳ; ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಪರಂಗಿ ಸಸ್ಯ ಏಕದಳ ಸಸ್ಯವಾದರೂ ಎಲೆಗಳಲ್ಲಿ ದ್ವಿದಳ ಸಸ್ಯಗಳಲ್ಲಿರುವಂತೆ ಜಾಲಬಂಧ ನರವಿನ್ಯಾಸವಿದೆ. ಎಲೆಗಳಿಗೆ ವೃಂತಪರ್ಣಗಳುಂಟು. ಇವು ಪ್ರತಿಯೊಂದು ಎಲೆಯ ಬುಡದಿಂದ ಹೊರಬರುವ ಎರಡು ಅಡರು ಅಥವಾ ಸುರುಳಿ ಬಳ್ಳಿಗಳ ರೂಪದಲ್ಲಿವೆ. ಗಿಡ ಆಸರೆಯನ್ನು ಹಬ್ಬಿ ಬೆಳೆಯಲು ಇವು ಸಹಕಾರ ನೀಡುವುವು. ಆದರೆ ಏಕದಳ ಸಸ್ಯವಾದ ಇದರಲ್ಲಿ ವೃಂತಪರ್ಣಗಳಿಲ್ಲ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಈ ಅಭಿಪ್ರಾಯದಂತೆ ಎಲೆಯ ತೊಟ್ಟು ಮೂರು ವಿಭಾಗವಾಗಿ ಮಧ್ಯದ ಭಾಗ ಮಾತ್ರ ನಿಜಪತ್ರರೂಪವನ್ನು ತಳೆದು ಉಳಿದೆರಡು (ಬದಿಯ) ಭಾಗಗಳು ಸುರುಳಿ ಬಳ್ಳಿಗಳಾಗಿ ಬೆಳೆದಿವೆ; ಎಲೆಗಳು ವಾಸ್ತವವಾಗಿ ವೃಂತಪರ್ಣರಹಿತ. ಗಂಡು ಹೆಣ್ಣು ಹೂಗಳು ಪ್ರತ್ಯೇಕ; ಬೇರೆ ಬೇರೆ ಗಿಡದಲ್ಲಿ ಕಂಡುಬರುವುವು. ಹೂಗಳು ಚಿಕ್ಕವು; ಎಲೆಯ ಕಕ್ಷದಲ್ಲಿ ಛತ್ರಮಂಜರಿ ಮಾದರಿಯಲ್ಲಿ ಅರಳುವುವು. ಪ್ರತಿ ಪುಷ್ಪದಲ್ಲಿ 6 ಪೆರಿಯಾಂತ್ ಹಾಳೆಗಳು, 6 ಕೇಸರಗಳು, ಮೂರು ಕಾರ್ಪೆಲುಗಳಿಂದ ರಚಿತವಾದ ಉಚ್ಚಸ್ಥಾನದ ಅಂಡಾಶಯ ಇವೆ. ಅಂಡಕೋಶ ಮೂರು ಕೋಣೆಗಳಿಂದ ಕೂಡಿದೆ. ಪ್ರತಿ ಕೋಣೆಯಲ್ಲಿ 1-2 ಅಂಡಕಗಳುಂಟು.

	ಪರಂಗಿಚೆಕ್ಕೆಯ ಒಣಬೇರುಗಳಿಂದ ಸಾರ್ಸಪರಿಲ ಎಂಬ ವಸ್ತು ಸಿಕ್ಕುತ್ತದೆ. ಸುವಾಸನಾಯುಕ್ತವಾದ ಇದನ್ನು ರಕ್ತಶುದ್ಧೀಕಾರಕವಾಗಿ ಬಳಸಲಾಗುತ್ತದೆ.
(ಪಿ.ಕೆ.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ